ದ್ರೋಣ
ಕೌರವಪಾಂಡವರ ವಿದ್ಯಾಗುರು. ಭರದ್ವಾಜ ಮಹರ್ಷಿಯ ಮಗ. ಪೈಶಾಚಿಯೆಂಬ ಅಪ್ಸರೆಯನ್ನು ಕಂಡು ಕಾಮಪರವಶನಾದ ಆ ಮುನಿ ಸ್ಖಲಿತನಾಗಿ ತನ್ನ ವೀರ್ಯವನ್ನು ಒಂದು ದ್ರೋಣದಲ್ಲಿ ಇರಿಸಿದ. ಅಲ್ಲಿಯೇ ಒಂದು ಗಂಡು ಮಗು ಜೀವ ತಳೆದು ನಿಂತಿತು. ಈತನೇ ದ್ರೋಣ. ಅಗ್ನಿವೇಶ ಮಹರ್ಷಿ ಈತನ ಚಿಕ್ಕಪ್ಪ. ಆತನ ಬಳಿಯೇ ಈತ ಧನುರ್ವಿದ್ಯೆ ಕಲಿತ. ಶರದ್ವಂತನ ಮಗಳು ಕೃಪಿ ಈತನ ಹೆಂಡತಿ. ಅಶ್ವತ್ಥಾಮ ಈತನ ಮಗ.  ದ್ರುಪದ ಈತನ ಸಹಪಾಠಿ. ಧನಾರ್ಜನೆಗಾಗಿ ಒಮ್ಮೆ ದ್ರುಪದನಲ್ಲಿಗೆ ಹೋಗಿ ಅವಮಾನಿತನಾದನಾದರೂ ಮುಂದೆ ಶಿಷ್ಯ ಅರ್ಜುನನ ಸಹಾಯದಿಂದ ದ್ರುಪದನ ಗರ್ವಭಂಗ ಮಾಡಿದ. ಕೌರವರಿಗಿಂತಲೂ ಪಾಂಡವರ ಮೇಲೆಯೇ ಈತನ ಪ್ರೇಮ.  ದ್ರೌಪದೀ ಪರಿಣಯದ ಅನಂತರ ಪಾಂಡವರನ್ನು ಕರೆಸಿ ಅವರಿಗೆ ಅರ್ಧ ರಾಜ್ಯ ಕೊಡಬೇಕೆಂದು ಧೃತರಾಷ್ಟ್ರಾದಿಗಳ ಎದುರಿನಲ್ಲಿ ಹಠಹಿಡಿದ.  ಪಾಂಡವರ ರಾಜಸೂಯಕ್ಕೆ ಬಂದಿದ್ದ. ಪಾಂಡವರು ದ್ಯೂತದಲ್ಲಿ ಸೋತು ಕಾಡು ಪಾಲಾದುದ್ದನ್ನು ಕಂಡು ಮರುಗಿ ದುರ್ಯೋಧನನಿಗೆ ಬುದ್ಧಿ ಹೇಳಿದ. ಕೌರವ ಪಾಂಡವರಲ್ಲಿ ಸಂಧಿ ಈಡೇರಿದೆ ಯುದ್ಧ ಅನಿವಾರ್ಯವಾದಾಗ ಕೌರವನ ಪಕ್ಷದಲ್ಲಿ ನಿಂತು ಹೋರಾಡಿದ. ಆರನೆಯ ದಿನದ ಯುದ್ಧದಲ್ಲಿ ವಿರಾಟನ ಪುತ್ರ ಶಂಖನನ್ನು ಕೊಂದ. ಭೀಷ್ಮನ ಮರಣಾನಂತರ ದುರ್ಯೋದನನ ಬೇಡಿಕೆಯ ಮೇರೆಗೆ ಸೇನಾಪತಿ ಪಟ್ಟವಹಿಸಿದ.  ಯುಧಿಷ್ಟಿರನನ್ನು ಸೆರೆ ಹಿಡಿದು ಕೊಡುವುದಾಗಿ ದುರ್ಯೋಧನನಿಗೆ ಭಾಷೆ ಕೊಟ್ಟ. ಅರ್ಜುನನಿಂದ ಭಂಗ ಪಟ್ಟ ಅನಂತರ ಪಾಂಡವ ಸೇನೆಯಲ್ಲಿ ಯಾವನಾದರೂ ಒಬ್ಬ ಮಹಾರಥನನ್ನು ಕೊಲ್ಲುವುದಾಗಿ ಪ್ರತಿಜ್ಞೆ ಮಾಡಿ ಪದ್ಮವ್ಯೂಹವನ್ನು ರಚಿಸಿದ. ಆ ವ್ಯೂಹವನ್ನು ಭೇದಿಸಿದ ಅಸಮಬಲ ಅಭಿಮನ್ಯುವನ್ನು ಕೊಂದ ಆರು ಜನರಲ್ಲಿ ಈತನೂ ಒಬ್ಬ. ಮುಂದೆ ಅರ್ಜುನನಿಂದ ಜಯದ್ರಥನನ್ನು ರಕ್ಷಿಸುವುದಕ್ಕಾಗಿ ಶಕಟವ್ಯೂಹ ರಚಿಸಿದನಾದರೂ ವಿಫಲನಾಗಿ ದುರ್ಯೋಧನನ ನಿಂದೆಗೆ ಒಳಗಾದ. ಪಾಂಡವವೀರರಾದ ಭೀಮ, ಧೃಷ್ಟದ್ಯುಮ್ನ, ಸಾತ್ಯಕಿ, ದ್ರುಪದ ಹಾಗೂ ವಿರಾಟರೊಂದಿಗೆ ಯುದ್ಧ ಮಾಡಿದ; ದ್ರುಪದ ಹಾಗೂ ವಿರಾಟರನ್ನು ಕೊಂದ.  ತನ್ನ ಪ್ರಿಯಪುತ್ರ ಅಶ್ವತ್ಥಾಮ ಮಡಿದನೆಂಬ ಸುಳ್ಳು ಸುದ್ಧಿಯನ್ನು ಕೇಳಿ ದುಃಖಿತನಾಗಿದ್ದಾಗ ದೃಷ್ಟದ್ಯುಮ್ನ ಈತನನ್ನು ಕೊಲ್ಲಲು ಯತ್ನಿಸಿದ.  ಭೀಮನ ಚುಚ್ಚು ಮಾತುಗಳನ್ನು ಸಹಿಸದೆ ಶಸ್ತ್ರತ್ಯಾಗ ಮಾಡಿ ಯೋಗಬಲದಿಂದ ದೇಹತ್ಯಾಗ ಮಾಡಿದಾಗ ಧೃಷ್ಟದ್ಯುಮ್ನನಿಂದ ಹತನಾದ.
(ಎಸ್.ಎಸ್.ಜೆಎ.)

2)	ಇನ್ನೊಂದು ಕಥೆಯಂತೆ ಅಷ್ಟವಸುಗಳಲ್ಲಿ ಒಬ್ಬ.  ಈತ ತನ್ನ ಪತ್ನಿ ಧರೆ ಎಂಬಾಕೆಯೊಂದಿಗೆ ಗಂಧಮಾಧನ ಪರ್ವತದಲ್ಲಿ ಸಂತನಾರ್ಥವಾಗಿ ತಪಸ್ಸು ಮಾಡಿದ. ಎಷ್ಟೊ ತಪಸ್ಸು ಮಾಡಿದರೂ ಫಲ ದೊರಕದೆ ಇಬ್ಬರೂ ಅಗ್ನಿ ಪ್ರವೇಶಕ್ಕೆ ಸಿದ್ಧರಾದರು.  ಆಗ ಅಶರೀರವಾಣಿಯೊಂದು ನೀವು ಚಿಂತಿಸಬೇಕಾಗಿಲ್ಲ ಆ ಭಗವಂತ ನಿಮ್ಮಲ್ಲಿ ಪುತ್ರಭಾವದಿಂದಿದ್ದು ತನ್ನ ಬಾಲಲೀಲೆಗಳನ್ನು ತೋರುತ್ತಾನೆಂದು ನುಡಿಯಿತು.  ಬಳಿಕ ಇವರಿಬ್ಬರೂ ನಂದಗೋಕುಲದಲ್ಲಿ ಯಶೋಧೆ ನಂದರೆಂಬ ಹೆಸರಿನಿಂದ ಜನಿಸಿ ಶ್ರೀಕೃಷ್ಣನ ಬಾಲಲೀಲೆಗಳನ್ನು ನೋಡಿ ಆನಂದಿಸಿದರು.  ಈ ವೃತ್ತಾಂತ ಭಾಗವತದಲ್ಲಿ ಬಂದಿದೆ.

3)	 ಭಾರತ ವರ್ಷದ ಒಂದು ಪರ್ವತಕ್ಕೆ ದ್ರೋಣ ಎಂಬ ಹೆಸರಿದೆ.        *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ